ಬೆಂಗಳೂರು: ವಿಕಲಚೇತನರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಲು ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಳಗೊಳ್ಳುವಂತೆ ಮಾಡಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಇನ್ಕ್ಯುಬೇಷನ್ ಸೆಂಟರ್ ಅನ್ನು ಪ್ರಾರಂಭಿಸಲಿದೆ.ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ‘ಬೆಂಗಳೂರು ಕೌಶಲ್ಯ ಶೃಂಗಸಭೆ–2025’ದಲ್ಲಿ ‘2032ರ ವೇಳೆಗೆ ಟ್ರಿಲಿಯನ್ ಡಾಲರ್ ಆರ್ಥಿಕತೆಗಾಗಿ ಶಿಕ್ಷಣ, ಕೌಶಲ್ಯ ಮತ್ತು ಕೈಗಾರಿಕೆಯ ಸಂಯೋಜನೆ” ವಿಷಯವಾಗಿ ನಡೆದ ಕಾರ್ಯಾಗಾರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದರು.ವಿಕಲಚೇತನರಿಗೆ ಕೌಶಲ್ಯ ತರಬೇತಿ ನೀಡುವುದು ಬಹಳ ಮುಖ್ಯವಾಗಿದ್ದು, ಇದಕ್ಕಾಗಿ ಐಟಿ, ಬಿಟಿ, ಕೌಶಲ್ಯ ಅಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಒಟ್ಟಾಗಿ ಇನ್ಕ್ಯುಬೇಷನ್ ಸೆಂಟರ್ ಸ್ಥಾಪನೆಗೆ ಕೆಲಸ ಮಾಡುತ್ತವೆ ಎಂದು ಹೇಳಿದರು.ಈ ಪ್ರಸ್ತಾವನೆಯನ್ನು ನವೆಂಬರ್ 15 ರಂದು ಇಲಾಖೆಗಳಿಗೆ ಸಲ್ಲಿಸಲಾಗುವುದು. ಬೆಂಗಳೂರು ಟೆಕ್ ಶೃಂಗಸಭೆ 2025 ರ ಸಂದರ್ಭದಲ್ಲಿ ಪ್ರಕಟಿಸುತ್ತೇವೆಂದು ತಿಳಿಸಿದರು.


