ಹಿನಕಲ್ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ನಡೆಯುತ್ತಿದ್ದರೂ, ಸ್ಥಳೀಯರು ಎದುರಿಸುತ್ತಿರುವ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗೆ ಯುಜಿಡಿ (Underground Drainage) ವ್ಯವಸ್ಥೆ ಬ್ಲಾಕ್ ಆಗಿ ನಿಂತಿದ್ದು, ಮನೆ ಕಸ, ಕಡ್ಡಿ ಹಾಗೂ ವಿವಿಧ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಡಂಪಿಂಗ್ ಯಾರ್ಡ್ ತರಹ ಹಾಕಲಾಗುತ್ತಿದೆ.
ಈ ಪ್ರದೇಶದಲ್ಲಿ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಬರುವ ಉದ್ಯಾನವನ ಪಕ್ಕದಲ್ಲೇ ಕಸದ ಗುಡ್ಡ ಕಂಡು ಕೆಟ್ಟ ವಾಸನೆ ಹರಡುತ್ತಿದೆ. ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿರುವುದರಿಂದ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತಿದೆ.
ಸ್ಥಳೀಯರು ಪಾಲಿಕೆ ಆಯುಕ್ತರು, ವಲಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ವಯಸ್ಕರು ತಮ್ಮ ನೋವನ್ನು ಹಂಚಿಕೊಂಡು, ರಸ್ತೆಗಳಲ್ಲಿ ಓಡಾಡಲು ಹಾಗೂ ಉದ್ಯಾನವನದಲ್ಲಿ ಸಮಯ ಕಳೆಯಲು ತುಂಬಾ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ. ಮಕ್ಕಳು ಹಾಗೂ ಹಿರಿಯರು ಸುರಕ್ಷಿತವಾಗಿ ಓಡಾಡಲು, ವಿಶ್ರಾಂತಿ ಪಡೆಯಲು ಪಾರ್ಕ್ ಹಾಗೂ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
ಕ್ಯಾಮೆರಾ ಪರ್ಸನ್: ರಿಷಬ್
ವರದಿ: ಸುಬ್ರಮಣ್ಯ, ಮೈಸೂರು
