ಮೈಸೂರು ಜಿಲ್ಲೆ, ಹುಣಸೂರು:
ಬಿಳಕೆರೆ ಹೋಬಳಿಯ ಗದ್ದಿಗೆ ಶ್ರೀ ಕ್ಷೇತ್ರ ಕೆಂಡ ಗಣೇಶ್ವರ ಸ್ವಾಮಿ ಹಾಗೂ ಮಾದೇಶ್ವರ ಸ್ವಾಮಿ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮೈಸೂರು–ಗದ್ದಿಗೆ ಮೇನ್ ಸೇತುವೆ ಗಂಭೀರವಾಗಿ ಶಿಥಿಲಗೊಂಡಿದ್ದು, ಸ್ಥಳೀಯರು ಮತ್ತು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ.
ಪ್ರತಿದಿನ ನೂರಾರು ಜನ ಸಂಚಾರ ಮಾಡುವ ಈ ಸೇತುವೆಯ ಕಾಂಕ್ರೀಟ್ ಭಾಗಗಳು ಕುಸಿದು ಹೋಗುತ್ತಿವೆ, ಕಂಬಗಳು ಬಿರುಕು ಬಿಟ್ಟಿವೆ ಮತ್ತು ಮಳೆಗಾಲದಲ್ಲಿ ನೀರು ನುಗ್ಗಿ ಸೇತುವೆಯ ಬಲ ಕುಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೂರರ್ಜಿಗೂ ಸ್ಪಂದನೆ ಇಲ್ಲವೆಂಬ ಸಾರ್ವಜನಿಕರ ಅಳಲು
ಸೇತುವೆಯ ದುಸ್ಥಿತಿಯನ್ನು ಹಲವು ಬಾರಿ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಶಾಸಕರಿಗೆ ತಿಳಿಸಿದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮತ ಕೇಳುವಾಗ ಮಾತ್ರ ಮತದಾರರು ಸ್ಮರಣೆ; ಜನರ ಸುರಕ್ಷತೆ ಬಗ್ಗೆ ಯಾಕೆ ಸ್ಪಂದನೆ ಇಲ್ಲ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರಕ್ಕೂ ತೊಂದರೆ
ಗದ್ದಿಗೆ ಶ್ರೀ ಕ್ಷೇತ್ರಕ್ಕೆ ಪ್ರತಿದಿನ ಭಕ್ತರ ಸಂಚಾರ ಹೆಚ್ಚಾಗಿರುವುದರಿಂದ, ಸೇತುವೆಯ ದುಸ್ಥಿತಿ ಧಾರ್ಮಿಕ ಚಟುವಟಿಕೆಗಳಿಗೂ ಅಡ್ಡಿಯಾಗಿದೆ. ವಿಶೇಷವಾಗಿ ಉತ್ಸವ ಮತ್ತು ಜಾತ್ರೆಗಳ ಸಮಯದಲ್ಲಿ ಅಪಾಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಸಾರ್ವಜನಿಕರ ಬೇಡಿಕೆ
- ಸೇತುವೆಯ ತಕ್ಷಣದ ಪರಿಶೀಲನೆ
- ತುರ್ತು ದುರಸ್ಥಿ ಅಥವಾ ಹೊಸ ಸೇತುವೆ ನಿರ್ಮಾಣ
- ಜನಪ್ರತಿನಿಧಿಗಳ ಸ್ಥಳೀಯ ಭೇಟಿ
- ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ
ಸ್ಥಳೀಯರು ಈಗ ಸ್ಪಷ್ಟವಾಗಿ ಕೇಳುತ್ತಿದ್ದಾರೆ —
“ನಮ್ಮ ಜೀವಕ್ಕೆ ಅಪಾಯ ಆಗುವ ಮುನ್ನ ಕೂಡಲೇ ಎಚ್ಚರಿಕೆ ವಹಿಸಿ ಕ್ರಮ ಕೈ ಗೊಳ್ಳಿರಿ.”
